
ನಿನ್ನ ನೆನಪೇ ಅಲ್ಲವೆ
ಕತ್ತಲಲಿ ಕಂಡಿದ್ದು?
ನೂರು ಮಾತಲ್ಲೂ.. ಮೌನವನ್ನೇ ನುಡಿಸಿದ್ದು?
ಎದೆಯಾಳದಲ್ಲಿ ಎಲ್ಲೋ ಅಡಗಿದ್ದು,
ನೆನಪ ನೆಪ ಮಾಡಿ ಬಂದೆ.. ಅಲ್ಲವೆ?
ಗಂಟಲ ನರ ಬಿಗಿಯಿತು,
ಕಣ್ಣಂಚಲಿ ಕಂಬನಿ ಹನಿಯಿತು,
ಕ್ಷಣ ಕ್ಷಣವೂ ದಿನ ದಿನವೂ
ದೂರ ಮಾಡಿದಷ್ಟೂ..
ಹತ್ತಿರ ಬರುವೆಯಲ್ಲವೆ??
ಮತ್ತೆ ಬರಡಾದೆ ನಾನು,
ಬರಬೇಡ..
ಯಾವ ನೆಪವನೂ ಮಾಡಬೇಡ..
ವಸಂತನಪ್ಪುವ ಮನಸಿಲ್ಲ..
ನಿನ್ನೋಡನೀಜಿ ದಡ ಸೇರಲಾರೆ..
ಎಲ್ಲಿಂದಲೋ ಬಂದು, ಸವರಿ ನೆಡೆವ ಗಾಳಿಯಂತೆ,
ಎಲ್ಲೆಲ್ಲೋ ಹರಿದು,ಕೊರೆದು ದಡವ, ಭೋರ್ಗರೆವ ಕಡಲಂತೆ,
ಎಲ್ಲಿ ಆದಿ ನಿನಗೆ, ಎಲ್ಲಿ ಅಂತ್ಯ??
ಇರುವಷ್ಟೂ ಹೊತ್ತು..
ಮೈಯೆಲ್ಲ ನವೆಗೊಳಿಸಿ, ಹದ ಹದವಾಗಿ ಸುಟ್ಟು ನುಂಗುವುದು
ನಿನ್ನ ನೆನಪೇ ಅಲ್ಲವೆ??
ಪೂರ್ವದಿಂದ ಪಡುವಣಕೆ ಸಾಗುವ ರವಿ
ಕತ್ತಲ ನೀಗಿ ಬೆಳಕ ಬೀರುವನೋ,
ಬೆಳಕ ನೆಪದಲ್ಲಿ ಕತ್ತಲ ತರುವನೋ...
ತಿಳಿದವರಾರು??
ನಿನ್ನ ನೆನಪೂ ಅಷ್ಟೆ!!!
ಚಿತ್ತದಿಂದ ಹೋರಬಂದು ನೋಯಿಸುವುದೋ..
ನೋಯಿಸಲೆಂದೇ ಹೊರಬರುವುದೋ..
ಗೊತ್ತಿಲ್ಲ!!!
ದಟ್ಟ ಕಾಡಿಗೆಲ್ಲಿಯದು ಹಗಲು??
ಕಡಲ ಗರ್ಭಕ್ಕೆಲ್ಲಿಯದು ಬೆಳಕು?
ರವಿಯೂ ಕಾಣದಾದ..
ನಲಿವು,ಗೆಲುವು ಬರಿಯ ಮರೀಚಿಕೆ..
ನಾನು-ನೀನು ವಿಧಿಯ ಚಿತ್ರದಲಿ ಮುಗಿದು ಹೋದ ಸಂಚಿಕೆ..
ತಿಳಿದೂ ಕಾಲವ ಹಿಂದಕೆಳೆವ ಬಯಕೆ
ನಿನ್ನ ನೆನಪಿನದೇ ಅಲ್ಲವೇ?
ಬಣಗುಡುವ ಎದೆಯಲ್ಲೂ ದನಿಮೂಡಿಸುವಾಸೆ
ನಿನ್ನ ನೆನಪಿನದೇ ಅಲ್ಲವೆ??
No comments:
Post a Comment
Foot prints