ಈ octoberನಲ್ಲಿ ನನ್ನ ಮುತ್ತಜ್ಜಿಯ ಮಾಷಿಕಕ್ಕೆ ಅಜ್ಜನಮನೆಗೆ ಹೋಗಿದ್ದೆ. ಆಗ ಶಾಲೆಗೆಲ್ಲ ರಜ, ಜೊತೆಗೆ ಅಜ್ಜನಮನೆಯಲ್ಲಿ ಮಾಷಿಕ.. ಎಲ್ಲ ಮೊಮ್ಮಕ್ಕಳು ಪಬ್ಬಿ,ಕಿಕ್ಕಿ,ಕೌಶಿಕಾ, ನಿಕಿತಾ, ವಿಂಧ್ಯಾ ಎಲ್ಲರೂ ಅಜ್ಜನಮನೆಯಲ್ಲೇ ಇದ್ರು.ಈ ಚಿಂಟು- ಪಿಂಟುಗಳನ್ನು ನಿಮಗೆ introduce ಮಾಡಿಸ್ತೀನಿ. ಇವರಲ್ಲೆಲ್ಲ ದೊಡ್ಡವಳು ಅಂದ್ರೆ ನಾನೇ. ನನ್ನ ನಂತ್ರ ಪಬ್ಬಿ(ಪ್ರಭಾತ). ಈ ಸಲ 7th std. ನಂತ್ರ ಕೌಶಿಕ-ಈ ಸಲ 4th std. ಉಳಿದವರೆಲ್ಲ KGಗೆ ಹೋಗುವವರು. ನನ್ನ ನೋಡ್ತಿದ್ದಂಗೆ
"ನಿವೇತಕ್ಕೋಂsssದಿ" ಎಂದು ಬಂದು ಕೈ ಹಿಡಕೋಂಡ ಕೌಶಿಕ.
"ನಿವೇತಕ್ಕಾ ದೊಡ್ಡಮ್ಮಾ ಬೈಂದಿಲ್ಯ?" ಪಬ್ಬಿ ಕೇಳಿದ.
ನಾನು ಇನ್ನೇನು "ಓಂssದಿ.. ದೊಡ್ಡಮ್ಮ ಬಂಜಿಲ್ಲೆ.. ಆನು ಮತ್ತೆ ದೊಡ್ಡಪ್ಪ ಬಂಜ್ಯ" ಎಂದು ಉತ್ತರಿಸುವುದರೋಳಗೆ ಕಿಕ್ಕಿ(ಲಿಖಿತ್) ನನ್ಹತ್ರ ಬಂದು,
"ನಿಮೇದಿತಕ್ಕಾ, ನೋಡೇss.. ಈ ವಿಂಧ್ಯಾ ಆಟಕ್ಕೆ ಬತ್ತೇ ಇಲ್ಲೆ.."ಅಂದಾ.
ಕಿಕ್ಕಿಯನ್ನ ನೋಡಿ ತುಂಬಾ ದಿನಗಳಾಗಿತ್ತು. ಇನ್ನೂ 1st std.ಟುಮ್ಮ-ಟುಮ್ಮಗೆ, ತುಂಬಾ ಮುದ್ದಾಗಿದಾನೆ.ಅವನು ಆ ಮುದ್ದು ಭಾಷೆಯಲ್ಲಿ complaint ಹೇಳೋದೇ ಇನ್ನೂ ಮುದ್ದಾಗಿತ್ತು.
ಅಷ್ಟರಲ್ಲಿ ವಿಂಧ್ಯಾ
"ನಿವೇತಕ್ಕಾ, ಇವೆಲ್ಲಾ ಬೇಕೂ ಹೇಳೇ ಯನ್ನ ಔನ್ಟ್ ಮಾಡ್ತ ನೋಡೇss.."
ಅದೇ timeಗೆ ನಿಕಿತಾ..
"ಅಕ್ಕಾ, ಕ್ವಾಣೆಯಲ್ಲಿ ಬಾಳೆಹಣ್ಣು ಇಟ್ಟಿದ್ದ... ತೆಕ್ಕೋಡೆ" ಅಂದ್ಲು.
ಇವರೆಲ್ಲರ ಮಾತನ್ನ ಕೇಳಿಸಿಕೊಳ್ಳತಾನೇ ಕೋಣೆಯಲ್ಲಿ ಜೋತುಬಿಟ್ಟಿದ್ದ ಬಾಳೆಗೊನೆಯಿಂದ ಹಣ್ಣು ಕೋಯ್ದು ಕೊಟ್ಟೆ. ಆಗ ಪಬ್ಬಿ
"ನಿವೇತಕ್ಕಾ ಬೈಂದಲಿ, ನಾವೀಗ ಹಳೆ ಶಾಲೆ ಗುಡ್ಡಕ್ಕೆ ಹೋಪಲಾಗ್ತು.. ಯೇss.." ಅಂದ.
ದೊಡ್ಡವರೆಲ್ಲ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದರಿಂದ, ಈ ಚಿಂಟು-ಪಿಂಟುಗಳನ್ನ ಹಳೇ ಶಾಲೆ ಗುಡ್ಡಕ್ಕೆ ಕರೆದುಕೊಂಡು ಹೋಗುವವರು ಯಾರೂ ಇರಲಿಲ್ಲ. ಹಾಗಾಗಿ ಮೆತ್ತಿನಲ್ಲೇ ಆಟ ಆಡಿಕೊಳ್ಳತಾ ಇದ್ರು.. ಈಗ ನಾನೊಬ್ಬಳು "ದೊಡ್ಡವಳು" ಬಂದಂತಾಯಿತಲ್ಲ ಇವರನ್ನೆಲ್ಲ ಹಳೇ ಶಾಲೆ ಗುಡ್ದಕ್ಕೆ ಕರೆದುಕೊಂಡು ಹೋಗೋಕೆ.. ಹಮ್ಮ್..
ಶ್ರೀಪಾದ ಮಾಮ "ನಿವೇದಿತಾ, ಹುಷಾರಿ.. ಇವು ಗಲಾಟೆ-ಗಿಲಾಟೆ ಮಾಡಿದ್ರೆ ನೀನು ಹನಿ ಬೈಯಿ, ಸುಮ್ನ ಇದ್ಬುಡಡಾ..ಊಟದ ಹೊತ್ತಿಗೆ ಸುಬ್ಬನ್ನ ಕಳಿಸ್ತಿ.. ಬಂದ್ ಬುಡಿ.." ಎಂದು ಹೇಳಿ ಕಳಿಸಿದ್ರು...ನಾನು ನನ್ನ ಆ ಚಿಂಟು-ಪಿಂಟುಗಳ ಬೆಟಾಲಿಯನ್ ಕರಕೊಂಡು ಹಳೇ ಶಾಲೆ ಗುಡ್ದಕ್ಕೆ ಹೊರಟೆ. ಆ ಚಿಂಟು-ಪಿಂಟುಗಳೆಲ್ಲ ಓಡಿ ಹೋಗಿ ಆಟ ಶುರು ಮಾಡಿಕೊಂಡರು.ನನಗೆ ಮಾತ್ರ ನನ್ನ ಬಾಲ್ಯದ ನೆನಪುಗಳು ನೆನಪಾಗ್ತಾ ಹೋದ್ವು.. ದಾರಿ ಉದ್ದಕ್ಕೂ..
ಸುರಗೀ ಹೂವಿನ ಪರಿಮಳ.. ಆ ಮರ ಇಲೇ ಎಲ್ಲೋ ಇರಬೇಕು.ನಾನು, ಭಟ್ರ ಮನೆ ಉಷಾ ಇಬ್ರೂ ಬೆಳಗ್ಗೆ ಹೂಬುಟ್ಟಿ ಹಿಡದು ಸುರುಗೀ ಹೂ ಹೆಕ್ಕಲಿಕ್ಕೆ ಹೋಗತಿದ್ವಿ. ಬುಟ್ಟಿಗಟ್ಟಲೇ ಹೆಕ್ಕಿಕೊಂಡು ಬಂದು, ಪೋಣಿಸಿ ಮಾಲೆ ಮಾಡಿ ಇಡತಿದ್ವಿ. ಉಷಾಗೆ ಮಾತ್ರಾ ಉದ್ದ ಜಡೆ ಇತ್ತು. ನನ್ನದಂತು ಬಾಯ್ ಕಟ್.ಆದ್ರೂ ಆ ಮಾಲೆನೇ ಜಡೆ ಥರಾ ಜೋತು ಬಿಟ್ಟು ಮುಡೀತಿದ್ದೆ.
ಕವಳಿಕಾಯಿ, ಕರೀ ಮುಳೇ ಹಣ್ಣು, ಬಿಳೀ ಮುಳ್ಳೇ ಹಣ್ಣು ಎಲ್ಲ ಎಷ್ಟೊಂದು ಮಟ್ಟಿಗಳಿದ್ದವು.. ಈಗ ಕಡಿಮೆಯಾಗಿದೆ. ಗಣೇಶಣ್ಣ, ಸತೀಶಣ್ಣ, ಉಷಾ, ಆಶಾ, ನಾನು ಎಲ್ಲ ಬೆಟ್ಟ-ಬ್ಯಾಣ ತಿರುಗಿ ಆ ಮಟ್ಟಿಯ ಮುಳ್ಳನ್ನ ಪರಚಿ-ತೆರಚಿಕೊಂಡು ಹಣ್ಣನ್ನೆಲ್ಲ ಕೊಯ್ತಿದ್ವಿ. ನಮ್ಮೆಲ್ಲರಲ್ಲಿ ಗಣೇಶಣ್ಣ ದೊಡ್ಡವನು. ನಾವು ಕೊಯ್ದ ಹಣ್ಣನ್ನೆಲ್ಲ ಅವನಿಗೆ ಕೊಡಬೇಕಿತ್ತು. ಆಮೇಲೆ ಅವನು ಎಲ್ಲರಿಗೂ ಸಮಪಾಲು ಮಾಡಿಕೊಡ್ತಿದ್ದ. ಈಗೆಲ್ಲೋ ಬೆಂಗಳೂರಿನಲ್ಲಿದ್ದನಂತಾ ಕೇಳಿದೀನಿ.
ಏಪ್ರಿಲ್, ಮೇ ಬಂತಂದ್ರೆ ಬೆಳ-ಬೆಳಗ್ಗೆ ತಿಂಡಿನೂ ತಿನ್ನದೇ ನಾವೆಲ್ಲ ಅಪ್ಪೆ ಹಣ್ಣು ಹೆಕ್ಕಲಿಕ್ಕೆ ಹೋಗ್ತಿದ್ವಿ. ಅಪ್ಪೆ ಮಾವಿನ ಹಣ್ಣಿನ ರುಚಿನೇ ಬೇರೆ. ಸಣ್ಣ ಸಣ್ಣ ಹಣ್ಣು, ಹುಳಿ-ಶೀಂ ಹುಳಿ-ಶೀಂ ರುಚಿ.. ಮಧ್ಯಾನ್ನ ಅದೇ ಹಣ್ಣಿನ ಅಪ್ಪೇಹುಳಿ/ ಶೀಂಯಾ ಸಾಸ್ಮೆ ಊಟ ಮಾಡುವಾಗ ಅದೇನೋ ಖುಷಿ.
ಗೋಪಜ್ಜನ ಮನೆ ಬಂತು. ಮದರಂಗಿ ಗಿಡ ಕಾಣಿಸ್ತಿಲ್ಲ. ಆಗ ಅಜ್ಜನಮನೆಗೆ ಬಂದಾಗಲೆಲ್ಲ ಮದರಂಗಿ ಹಚ್ಚಿಕೊಳ್ಳೋದು ಒಂದು ಸಂಪ್ರದಾಯದ ಥರಾ ಆಗಿ ಹೋಗಿತ್ತು ನನಗೆ. ನನ್ನಜ್ಜನ ಮನೆಯಲ್ಲಿ ಒಂದು ಮದರಂಗಿ ಗಿಡ ಇತ್ತು.. ಆದ್ರೆ ಗೋಪಜ್ಜನ ಮನೆಯಲ್ಲಿ ಇದ್ದಿದ್ದು ಕೆಂಡಮದರಂಗಿ ಗಿಡ. ಪ್ರತೀ ಸಲ ಕೊಟ್ಟೆ ಹಿಡಕೊಂಡು ಮದರಂಗಿ ಕೊಯ್ಯಲು ಅಲ್ಲಿಗೆ ಹೋದಾಗಲೆಲ್ಲ ಕುಸುಮತ್ತೆ ಮಜ್ಜಿಗೆ ತಂಬ್ಳಿ, ಬಾಳೆಕಾಯಿ ಚಿಪ್ಸು.. ಹೀಗೆ ಏನಾದರೊಂದು ತಿನ್ನಲಿಕ್ಕೆ ಕೊಡತಿದ್ರು.. ಮದರಂಗಿ ಹಚ್ಚಿಕೊಳ್ಳೊ ಹಿಂದಿನ ದಿನದಿಂದ ಅಜ್ಜನ, ಮಾವನ ಹತ್ರ "ಯಾರೂ ಯಲೆ ತೊಟ್ಟು ವಗ್ಯಲಿಲ್ಲೆ, ಯಂಗೇ ಕೊಡವು" ಅಂತಾ ಅಪ್ಪಣೆ ಕೊಟ್ಟಿಡತಿದ್ದೆ.ಆಯಿ ೨ ದಿನಗಳಿಂದ ನಿಂಬೆಕಾಯಿ ಕಡಿ ಕೂಡಿಡತಿದ್ರು. ಸುಣ್ಣ, ಚಾ ಸೊಪ್ಪು, ಎಲ್ಲ ಹಾಕಿ ನಿಂಬೆ ಹಣ್ಣಿನ ರಸದಲ್ಲೇ ಬೀಸಿ ಕೊಡತಿದ್ರು. ಆಮೇಲೆ ಗಸುಭಟ್ರ ಮನೆ ಲಲಿತಕ್ಕನ ಹತ್ರ design ಹಾಕಿಸಿಕೊಳ್ಳಲಿಕ್ಕೆ ಹೋಗತಿದ್ದೆ. ಆಗೆಲ್ಲ ಮದರಂಗಿ ಬಿಡಿಸೋದು ಅಂದ್ರೆ ಹಿಡಿಕಡ್ಡಿಯಿಂದ ಕೈ ಮೇಲೆ ಸ್ವಸ್ತಿಕಾನೋ, ಹೂವೋ ಬಿಡಿಸಿದ್ರೆ ಆಗಿತ್ತು. ಏನೂ ಇಲ್ಲ ಅಂದ್ರೆ ಟಿಂ-ಟಿಂ ಆದ್ರೂ ಆಗಿತ್ತು.. ಮತ್ತೆ ಏನೆಲ್ಲ ನಂಬಿಕೆಗಳು..
" ಮದರಂಗಿ ಬೀಸುವಾಗ ಮಾತಾಡಲಿಲ್ಲೆ, ಮಾತಾಡಿದ್ರೆ ಕೆಂಡ ಮದರಂಗಿನೂ ಕೆಂಪಾಗ್ತಿಲ್ಲೆ".. "ಮದರಂಗೆ ಹಚ್ಚಿಕ್ಯಂಡಾದ ಮೇಲೆ ಒಂದಕ್ಕಿಗೆ ಹೋಪಲಿಲ್ಲೆ"..
"ಮದರಂಗಿ ಹಚ್ಚಿಕ್ಯಳಕಿದ್ರೆ ರಾಮ ರಾಮ ಹೇಳಿ ಹೇಳಿದ್ರೆ ರಾಶೀ ಕೆಂಪಗಾಗ್ತು".. ಎಷ್ಟು ನಂಬತಿದ್ದೆ ಆಗ... ಮಲ್ಲಾಪುರ, ಹುಲ್ಲು ಬ್ಯಾಣ, ಕತ್ತಲೆ ಕೋಣೆಯಲ್ಲಿ ಹೇಮಂತಣ್ಣನ ಭೂತದ ಕಥೆ, ಎಷ್ಟೊಂದು ನೆನಪುಗಳು... ನೆನೆಸಿಕೊಳ್ಳತಾ ಹೋದ್ರೆ ನೆನಪಾಗ್ತಾ ಹೋಗುತ್ತೆ.. ಹಮ್ಮ್.. ನನ್ನ ಚಿಂಟು-ಪಿಂಟುಗಳ ಬೆಟಾಲಿಯನ್ನ ಜೊತೆ ನಾನೂ ಕ್ರಿಕೆಟ್ ಆಡಿದೆ, ನಂತರ ಸೌತೆಕಾಯಿ ಬಳ್ಳಿ, ಬೀನ್ಸ್ ಸ್ವಾಡಿಗೆ ಬಳ್ಳಿ ಎಲ್ಲ ಖಾಲಿ ಮಾಡಿದೆ. ಸಂಜೆ ವಾಪಸ್ ಮನೆಗೆ ಬರುವಾಗ ಬಸ್ನಲ್ಲಿ ಬಂದಿದ್ದು ನನ್ನ ಬಾಲ್ಯದ ದಿನಗಳನ್ನ ನೆನೆಸಿಕೊಂಡ ಖುಷಿಯ ಮುಗುಳ್ನಗೆ, ಬಸ್ಸಿನ ಜೋಗುಡತಕ್ಕೆ ಒಳ್ಳೆಯ ನಿದ್ದೆ.
Labels:
ನೆನಪು
Subscribe to:
Post Comments (Atom)
9 comments:
ಹ್ಮ್ಮ್. ಅಂತೂ ದೊಡ್ಡವರಾಗಿ ’ಗ್ಯಾಂಗ್ ಲೀಡರ್’ ಆಗ್ಬಿಟ್ರಾ? :-)
’ಓಂದಿ’ ಅಂದ್ರೆ ಏನು?
@jagali bhaagavata
ಹಿ ಹಿ ಹಿ.. ಒಂದ್ ಥರಾ ಗ್ಯಾಂಗ ಲೀಡರ್ರೇ.. ’ಓಂದಿ’ ಅಂದ್ರೆ ಓ+ಅಂದೆ ಅಂತಾ.. ನಮ್ಮಲ್ಲಿ ಯಾರದಾದ್ರೂ ಮನೆಗೆ ನೆಂಟರು ಬಂದರೆ ಅವರನ್ನ wel come ಮಾಡುವಾಗ ಅವರ ಹೆಸರು/ಸಂಬಂಧ ಕರೆಯುವ ರೂಢಿ ಇದೆ.. ಆಗ ಅವರು ’ಓಂದಿ’ ಎಂದು ಉತ್ತರಿಸುತ್ತಾರೆ.
ನಂಗನೂ ಹಿಂಗೇ ಬೇಸಿಗೆ ರಜೆಯಲ್ಲಿ, ಅಕ್ಟೋಬರ್ ರಜೆಯಲ್ಲಿ ಗುಡ್ಡಕ್ಕೆ ಹೋಗಿ ಕೌಳಿ, ಮುರುಗಲ, ಮಾವು ಎಲ್ಲ ಕೊಯ್ಯಲೆ ಹೋಗ್ತಿದ್ಯ.. ಎಲ್ಲ ಮತ್ತೆ ನೆನಪಾಗ್ವಂಗೆ ಮಾಡ್ಬಿಟ್ಟೆ :-)
ಭಾಗವತರೇ, ಅದು "ಓಂದಿ" ಅಲ್ಲ.. "[ಹೆಸರು/ಹೆಸರಿನ ಶಾರ್ಟ್ ಫಾರ್ಮ್]+ಸಂಬಂಧ+ಓಂಽಽಽಽದಿ".. ಶಿರಸಿ ಕಡೆಯ ಹವ್ಯಕರಲ್ಲಿ ಹೆಚ್ಚು ಬಳಕೆಯಲ್ಲಿದೆ. ಉದಾಹರಣೆಯನ್ನು ನಿವೇದಿತಾರವರು ಚೆನ್ನಾಗಿ ಕೊಟ್ಟಿದ್ದಾರೆ.
"ನಿವೇತ+ಅಕ್ಕ+ಓಂಽಽದಿ" :-)
ಥ್ಯಾಂಕ್ಸ್ ಹರೀಶ್. ನಿವೇತಕ್ಕ ಒಳ್ಳೆ ವಿವರಣೆ ಕೊಟ್ಟಿದಾರೆ :-)
ಈ ಬರಹ ಚೊಲೊ ಬಯಿಂಜು. (ಸರಿ ಇದ್ದಾ ನಾ ಬರ್ದಿದ್ದು? :-)
ಈ font colour ಅಷ್ಟು ಹಿಡಿಸ್ತಿಲ್ಲೆ ಈ layout-ಗೆ. ನೀವು ಇಷ್ಟಪಟ್ಟು ಹಾಕಿದ್ದಿದ್ರೆ ಹಾಗೆ ಇರ್ಲಿ ಬಿಡಿ.
ನಮಸ್ಕಾರ,
ಚೆನ್ನಾಗಿತ್ತು ಬರಹ. ಒಂದ್ಸಲ ಉತ್ತರ ಕನ್ನಡದಲ್ಲಿ ತಿರುಗಾಡಿ ಬಂದಂತೆ ಆಯ್ತು. ಸುರಗಿ ಹೂ..ಅಪ್ಪೆ ಹಣ್ಣು...ರುಚಿಯೇ...ಸೊಗಸೇ ಬೇರೆ. ಎಷ್ಟೋ ಬಾರಿ ನೆನಪುಗಳು ಹಳವಂಡ ಅನಿಸೋದಿದೆ. ಆದರೆ ಅದರಲ್ಲೂ ಇರುವ ಸವಿ ಎಷ್ಟು ಸೊಗಸಲ್ವೇ?ಒಳ್ಳೆ ಬರಹಕ್ಕೆ ಧನ್ಯವಾದ.
ಇನ್ನು ವ್ಯಾಕರಣ ಶಾಸ್ತ್ರಕ್ಕೆ ನಾವಂತೂ ಹೋಗೀದಿಲ್ಲ. ಅದ್ಕೆ ಭಾಗವತರೇ ಸೈ
ನಾವಡ
ಸಿನೆಮಾದಲ್ಲಿ ಹುಡಿಗೀರು ಚಿಳ್ಳೆ ಪಿಳ್ಳೆ ಕಟ್ಕ್ಯಂಡು ಕಿತಾಪತಿ ಮಾಡ್ತ್ವನಾ ಅದು ತೀರಾ ಸುಳ್ಳಲ್ಲ ಹಂಗರೆ
ಬರಹದ ಶೈಲಿ ಬಾಳ ಲಾಯ್ಕಿತ್ತು.
ಕನ್ನಡಪ್ರಭದಲ್ಲಿ ಲಿನ್ಕ್ ಇತ್ತು ನೋಡ್ಜಿ.
"ಓ ಅಂದಿ" ಅಂದ್ರೆ ಸರಿಯೇನಪ?
http://shreeshum.blogspot.com
@ ನಾವಡ
ನಿಜ, ನೆನಪುಗಳು ತುಂಬಾ ಚಂದ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
@ ಭಾಗವತ
ಭಾಗವತರೆ, ಮುಂದಿನ ಸಲದಿಂದ ಬಣ್ನಗಳ ಬಗ್ಗೂ ಗಮನ ವಹಿಸ್ತೀನಿ.
@shreeshum
:) moviesನಲ್ಲಿ ತೋರಿಸೊದೂ ಎಲ್ಲೋ ನಿಜವಾಗಿರುತ್ತೆ ಅಲ್ವಾ?? ನಿಮಗೆ ಇಷ್ಟ ಆಗಿದ್ದು ಖುಷಿಯಾಯ್ತು. ಪ್ರತಿಕ್ರಿಯೆಗೆ ಧನ್ಯವಾದಗಳು.
ನಿವೇದಿತ ಅವರೆ...
ಬರಹ ರಾಶೀ ಇಷ್ಟ ಆತು.
ಬಾಲ್ಯದ ನೆನಪಾಗ ಹಂಗೆ ಮಾಡಿದ್ದಕ್ಕೆ ಒಂದು ತ್ಯಾಂಕ್ಸ್, ನಂಗನೂ ಕೌಳಿ, ಮಾವು, ಪೇರಲೆಕಾಯಿ ಎಲ್ಲ ಕೊಯ್ಕಂಡು ತಿಂತಿದ್ಯ.. ಭರ್ತಿ ಚನಾಗಿ ಬರದ್ದೆ, ಬಂದ್ಯಾ ಅಂದಿ, ಓ ಅಂದಿ ಎಲ್ಲಾ ಕೇಳಕ್ಕೆ ಒಂತರಾ ಖುಷಿ ಆಗ್ತು, ಅಪ್ಪೆ ಹುಳಿ, ಮಾಯ್ನಣ್ಣು/(ಮಾವಿನ ಕಾಯಿ) ಸಾಸವೆ ನೆನಪು ಮಾಡಿದ್ದೆ, ಬಾಯಲ್ಲಿ ನೀರು ಬಂತು :)
Post a Comment