ಒಂಟಿ ನಡಿಗೆಗೆ,
ನೆರಳ ಜೊತೆ
ನೆರಳ ಜೊತೆ
ಕುರುಡು ಕಣ್ಣಿಗೆ ಕೈಯಲ್ಲಿ ಹಣತೆ
ಕನಸುಗಳೋ, ನೆನಪುಗಳೋ...
ವ್ಯತ್ಯಾಸ ತಿಳಿಯದಷ್ಟು ಮಸುಕು
ಎತ್ತ ಸಾಗುತ್ತಿದೆಯೋ ಏನೋ
ಹರುಕು-ಮುರುಕು ಬದುಕು
ನೆನೆದಷ್ಟೂ ಕಂಬನಿಗೇನೂ ಬರವಿಲ್ಲ
ಹಿಡಿ-ಮುಷ್ಠಿಯಷ್ಟು ಮುಗುಳ್ನಗೆ
ಕನ್ನಡಿಯೆದುರು ನಿಂತರೂ ಬಿಂಬವಿಲ್ಲ..
ಎಲ್ಲಿ ಅಡಗಿದೆಯೋ ಏನೋ ಭರವಸೆ
ಆಸರೆಯಾಗಬೇಕಿದ್ದ ಕನಸಿಗೇ ನಿಶ್ಶಕ್ತಿ
ಗುನುಗುನಿಸಲೂ ಹಾಡಿಲ್ಲ..
ನಿರ್ಭಾವದ ವಿರಕ್ತಿ.
ಪ್ರಶ್ನಿಸಬೇಕೇನು??
ಉತ್ತರವೇ ಬೇಡ..
ಬೇಡಬೇಕೇನು??
ನಡೆಯುವುದು ನಡೆಯಲಿ..
ಉಳಿದರೆ ಹೆಕ್ಕಿಕೊಂಡರಾಯಿತು..
ಉಸಿರು ಉಸಿರಿಗೂ ಕತ್ತಲೆಯ ಲೆಕ್ಕ
ಹೆಜ್ಜೆ ಹೆಜ್ಜೆಗೂ ಬಾಯಾರಿಕೆ
ನಿದ್ದೆಯಲ್ಲೂ ಅದೆಂತದೋ ಕನವರಿಕೆ.
ಮಾತು ತೊದಲುವ ಮುನ್ನ
ಮೌನವಾದರೆ ಸಾಕು
ಉಳಿದದ್ದು ನಡೆದ ಗುರುತಿಗೆ
ಜೊತೆಯಾದ ನೆರಳ ಹೆಸರಿಗೆ.