ಅವಳು - ಅವನು


ಅವನು -
ಸಣ್ಣದೊಂದು ಮುಗುಳುನಗೆ ನನ್ನ ಮುಖದಲ್ಲಿ ಬೆಳಗಿಂದಲೇ ಇತ್ತು. ಇಷ್ಟು ದಿನ ಪ್ರಶ್ಣೆಯಾಗಿಯೇ ಉಳಿಯುತ್ತಿದ್ದ ಆಲೋಚನೆಗೆ ಉತ್ತರ ಸಿಕ್ಕಿತ್ತು. ಇಷ್ಟು ವರ್ಷ ನನ್ನ ಎದುರಿಗೇ ಇದ್ದವಳು ಅವಳು. ನನ್ನ ಮನಸ್ಸಿನ ಪ್ರತೀ ಮಾತನ್ನೂ ಅರ್ಥ ಮಾಡಿಕೊಂಡವಳು. ನನ್ನ ವಾದ,ವಿವಾದಗಳಿಗೆ ಸರಿಯಾಗಿಯೇ ಉತ್ತರಿಸುತ್ತಿದ್ದವಳು.ವಿಚಾರವಾದಿ ಅವಳು. ನನ್ನ ಹಾಗೇ!!
ಜೀವನದಲ್ಲಿ ಒಂದು ಲಕ್ಷ್ಯ ಇಟ್ಟುಕೊಂಡವಳು ನನ್ನ ಹಾಗೇ!! ಓದುವ ಹುಚ್ಚು ನಮಗಿಬ್ಬರಿಗೂ.. ಓದುವ ಪುಸ್ತಕಗಳು ಮಾತ್ರ ಬೇರೆ ಬೇರೆ ರೀತಿಯದ್ದು. ಆದರೂ ಅದರ ಬಗ್ಗೆಗಿನ ನಮ್ಮ ವಾದಗಳು, ನಮ್ಮ ಅನಿಸಿಕೆಗಳು.. ಆಹ್ !! ಈಗ ನೆನೆಸಿಕೊಂಡರೆ ನಗು ಬರುತ್ತೆ.ಅದೇಷ್ಟು ಸಲ ನಮ್ಮ ವಾದಗಳು ಜಗಳಕ್ಕೆ ತಿರುಗಿದೆ..ಅದನ್ನೆಲ್ಲ ಜಗಳದಂತೆ ತೆಗೆದುಕೊಳ್ಳದೇ ಒಂದು ಪ್ರಬುದ್ಧ ಸಂಬಂಧ ಬೆಳೆಸುವುದರಲ್ಲಿ ಅವಳು ನನಗೆ ಸ
ರಿಯಾಗಿ ಇದ್ದಳು. ನಾವು ಆಡದ ಮಾತುಗಳಿಲ್ಲ.ಹಾಡದ ಹಾಡುಗಳಿಲ್ಲ. ಮೊಬೈಲಿನ ಬಿಲ್ಲು ಅದೆಷ್ಟು ಹೋಗಿತ್ತೋ?? ರಾತ್ರಿ ರಾತ್ರಿ ಎಲ್ಲ ಫೋನಾಯಿಸಿ ಮಲಗಿದ್ದವಳನ್ನು ಎಬ್ಬಿಸಿ ಮಾತಾಡುತ್ತಿದ್ದೆ.. ಹೇ ಹೇ ಹೇ.. ಯಾವುದಾದರೂ ಹಾಡು ಕೇಳಿ ಇಷ್ಟವಾದರೆ ಸಾಕು ತತ್ಕ್ಷಣ ಅವಳು ನನ್ನ ಮನಸ್ಸಿಗೆ ಬರುತ್ತಿದ್ದಳು. "ಆಹ!! ಎಷ್ಟು ಚಂದದ ಹಾಡು.. ಅವಳಿಗೆ ಹೇಳಿದರೆ ಖುಷಿಪಡ್ತಾಳೆ." "ಈ ವಿಚಾರದಲ್ಲಿ ಅವಳು ಹೀಗೇ ವಾದ ಮಾಡ್ತಾಳೆ." ಎಂಬ ಯೋಚನೆಗಳು ಅದೆಷ್ಟು ಸಲ ಬಂದಿದೆಯೋ ಏನೋ. ರಾತ್ರಿ ರಾತ್ರಿ ಎಲ್ಲಾ ನಮ್ಮ ಮಾತು ನಡೆಯುತ್ತಲೇ ಇರುತ್ತಿತ್ತು.ಯಾವತ್ತೂ ಅವಳ ಜೊತೆ ನನಗೆ ಬೇಸರ ಬಂದಿದ್ದಿಲ್ಲ. ನನಗೆ ಸರಿಯಾದ ಜೋಡಿ. ಮತ್ತೆ ಮುಗುಳುನಗೆ ನನ್ನ ತುಟಿಗಳ ಮೇಲೆ.

ಆವತ್ತು ನನ್ನ ಕೈ ಹಿಡಿದು "ನಾವಿಬ್ಬರು ನಮ್ಮ ಗೆಳೆತನವನ್ನ ಮುಂದಿನ ಹಂತಕ್ಕೆ ಯಾಕೆ ತಗೊಂಡು ಹೋಗಬಾರದು?" ಎಂದು ಕೇಳಿದ್ದಳು.ನನಗೇಕೋ ಅವಳನ್ನ ಪ್ರೀತಿ ಮಾಡುವ ವಿಚಾರವೇ ಬಂದಿರಲಿಲ್ಲ. ನೋಡೋದಿಕ್ಕೆ ಸುರಸುಂದರಿಯಲ್ಲದಿದ್ದರೂ ಚಂದವಾಗಿದ್ದಳು. ಆದರೆ ಅವಳನ ಹೇಗೆ ಪ್ರೀತಿಸಲಿ? ಅದೇಕೋ ಸರಿ ಅನ್ನಿಸಲಿಲ್ಲ. ಅವಳ ಕೆನ್ನೆ ಮೇಲೆ ನನ್ನ ಕೈಯ ಸವರಿ ಹೇಳಿದ್ದೆ, "ನಾನು ನೀನು ಹೀಗಿದ್ದರೇ ಚಂದ. ಮತ್ತೂ ಮುಂದಕ್ಕೆ ಸರಿಯಲ್ಲ".ಅವಳ ಕಣ್ಣಿನಲ್ಲಿ ನೀರಿನ ಪಸೆ ಬಂದಿತ್ತು. ಹೌದು ಬಂದಿತ್ತು ನೆನೆಪಿದೆ ನನಗೆ. ಅವಳ ಜೇನು ಬಣ್ಣದ ಕಣ್ಣಿನಲ್ಲಿ ನನ್ನ ಪ್ರತಿಬಿಂಬವೂ ಕಂಡಿತ್ತು. ಮೊದಲ ಬಾರಿಗೆ ಗಮನಿಸಿದ್ದೆ.. ಅದೆಷ್ಟು ದೊಡ್ಡ ಕಣ್ಣು ಅವಳದ್ದ!!.ಅದಕ್ಕೂ ಜೇನಿನ ಬಣ್ಣ!! ಬಿಸಿಲಿಗೆ ಗಾಜಿನಂತೆ ಹೊಳಪು. ಅವಳ ಕಣ್ಣಲ್ಲಿ ನೀರು ನೋಡಿದ್ದು ಇದೇ ಮೊದಲು. ಹೇಗೋ ಒಂದು ಹನಿಯೂ ಬೀಳದಂತೆ ತಡೆದಿಟ್ಟುಕೊಂಡಿದ್ದಳು. ನನಗದು ದೊಡ್ಡ ವಿಷಯ ಅನ್ನಿಸಲೇ ಇಲ್ಲ. ಅವಳಿಗೆ ನನ್ನ rejectionನ ಸಂಬಾಳಿಸುವ ಪ್ರಬುದ್ಧತೆ ಇದೆ. ಅಲ್ಲೇನು ನಡೆಯಲೇ ಇಲ್ಲದವರಂತೆ ಇಬ್ಬರೂ ಮತ್ತ್ಯಾವುದೋ ಹಾಡಿನ ಬಗ್ಗೆ ಮಾತಾಡಿಕೊಂಡಿದ್ದೆವು. ಇವತ್ತು ಅವಳ ಆ ಪ್ರಬುದ್ಧತೆಯೇ ನನಗೆ ಅವಳ ಬಗ್ಗೆ ಪ್ರೀತಿ ಬರುವಂತೆ ಮಾಡಿದೆ.
ಅವಳಂತೆ ನನ್ನ ತಿಳಿದವರು ಇಲ್ಲ. ನನ್ನ ಮತ್ತು ಅವಳ rapo ಚನ್ನಾಗಿದೆ.ನನಗೆ ಗೊತ್ತು ಅವಳಿಗೆ ನನ್ನ ಮೇಲೆ ಇರುವ ಪ್ರೀತಿ ಯಾವತ್ತೂ ಕಡಿಮೆಯಾಗಿಲ್ಲ. ಇವತ್ತು ಅವಳ ಜೊತೆ ಮಾತಾಡಿ ನಾನು ಅವಳನ್ನ ನನ್ನವಳನ್ನಾಗಿಸಿಕೊಳ್ಳಲಿಕ್ಕೆ ತಯಾರಿದ್ದೀನಿ ಅಂತಾ ಹೇಳಬೇಕು. ಹ!! ನನ್ನವಳು ಅವಳು.. ಆ ಕಲ್ಪನೆಯೇ ಎಷ್ಟು ಸುಂದರ ಅನ್ನಿಸ್ತಿದೆ. ಅವಳು ಕೊಟ್ಟ ಟಿ-ಶರ್ಟ್ ಹಾಕಿಕೊಂಡು ಹೋಗ್ತೀನಿ.

----------------------------------------------------------------------------------
ಅವಳು -
ಬೆಳಗ್ಗೆ ಏಳುತ್ತಲೇ ನನಗೆ ತಲೆಭಾರ ಅನ್ನಿಸ್ತಿತ್ತು.ನಿನ್ನೆ ಅವನು ಫೋನಾಯಿಸಿ "ನಾಳೆ ಸಿಗ್ತೀಯಾ" ಅಂದಾಗಲೇ ಯಾಕೋ ಒಂದು ತರಹದ ಹೆದರಿಕೆ. ಹೇಗೇ ಹೇಳಲಿ ಅವನಿಗೆ ಈ ವಿಚಾರಾನ?ಇಷ್ಟು ದಿನ ಮುಚ್ಚಿಟ್ಟು ಅದೇನೋ ತಪ್ಪು ಮಾಡಿದಹಾಗನ್ನಿಸ್ತಿದೆ. ಪ್ರತೀ ಸಲ ಫೋನಿನಲ್ಲಿ ಹೇಳಿಬಿಡಬೇಕು ಅನ್ನಿಸುತ್ತೆ. ಆದರೆ ಇಂಥ ವಿಷಯ ಫೋನಿನಲ್ಲಿ ಹೇಳುವುದು ಸರಿಯಲ್ಲ ಅಂತಾ ಭೇಟಿಯಾದಾಗ ಹೇಳೋಣ ಅಂತ ಸುಮ್ಮನ್ನಿದ್ದೆ. ಇವತ್ತು ಏನೇ ಆಗಲಿ, ಹೇಳಿಬಿಡಬೇಕು. ಹೇಗಂದರು ನನ್ನ ಅವನ ಗೆಳೆತನ ಗೆಳೆತನಕ್ಕಷ್ಟೆ ಸೀಮಿತ. ಹೌದು ಅದೇನೋ ಗೆಳೆತನಕ್ಕೂ ಮೀರಿದ್ದು ನಮ್ಮಿಬ್ಬರ ನಡುವೆ ಮೊದಲಿಂದಲೂ ಇದೆ. ಆದರೆ ಅದಕ್ಕೆ ಪ್ರೀತಿಯ ಹೆಸರು ಕೊಡೋದಕ್ಕೆ ಅವನಿಂದ ಆಗೋದಿಲ್ಲ. ಅವನ ಜೊತೆ ಬರಿಯ ಗೆಳೆತನ ಅಂತಾ ಹೇಳಿಕೊಳ್ಳಲಿಕ್ಕೆ ನನ್ನ ಮನಃಸಾಕ್ಷಿ ಒಪ್ಪಲ್ಲ. ಅವನು ನನ್ನ ಕೈ ಹಿಡಿಯುವ ರೀತಿ,ನನ್ನ ಕೆನ್ನೆ ಸವರಿ "Take Care " ಅಂದಾಗಲೆಲ್ಲ ಅಲ್ಲೇ ಅವನ ಅಪ್ಪಿಕೊಳ್ಳಬೇಕು ಅನ್ನುವಷ್ಟು ಆತುರ ನನಗೆ.ಅವನಿಗೂ ಹಾಗೇ.. ಕಂಡಕೂಡಲೇ ನನ್ನ ಕೈ ಹಿಡಿದು ಘಟ್ಟಿಯಾಗಿ ಒತ್ತುತ್ತಾನೆ.' ನನಗೂ ಅವನಿಗೂ ಇದು ಪ್ರೀತಿಯಲ್ಲ.. ನಮ್ಮಿಬ್ಬರ ಸ್ವಭಾವವೇ ಹಾಗೆ. ಇದಕ್ಕೆಲ್ಲ ಅಗತ್ಯಕ್ಕಿಂತ ಹೆಚ್ಚ ಅರ್ಥ ಕೊಡಬಾರದು' ಅಂತ ನಾನು ಯಾವಾಗಲೋ ನಿರ್ಧರಿಸಿಬಿಟ್ಟಿದ್ದೆ. ಆದರೂ ಅವನಿಲ್ಲದೇ ಎಲ್ಲವೂ ಖಾಲಿ ಖಾಲಿ. ಅವನ ಜೊತೆ ನಾನು ನನ್ನ ವಿಚಾರಗಳನ್ನೆಲ್ಲಾ ಎಷ್ಟು ಸುಲಭವಾಗಿ ಹಂಚಿಕೊಳ್ಳಬಲ್ಲೆ.ಅವನೂ ಹಾಗೇ.. ಯಾವತ್ತೂ ನನ್ನ judge ಮಾಡಲಿಲ್ಲ. ಇವತ್ತೂ ಹಾಗೇ ಇದ್ದಾರೆ ಸಾಕು. ನನಗವನನ್ನ ಕಳೆದುಕೊಳ್ಳಲಿಕ್ಕೆ ಸ್ವಲ್ಪವೂ ಇಷ್ಟವಿಲ್ಲ.
ನಾನು ಅವನು ಬೇರೆಯೇ. ಗೆಳೆತನ ,ಪ್ರೀತಿ , ಸಮಾಜ ಈ ಎಲ್ಲ definitionಗಳನ್ನೂ ದಾಟಿಬಂದವರು.ನನ್ನನ್ನ ಅರ್ಥ ಮಾಡಿಕೊಳ್ತಾನೆ ಅವನು. ಅವನು ಅಷ್ಟು ಪ್ರಬುದ್ಧವಾಗಿದಾನೆ. ಹೀಗೇ ಅದೇನೋ ಧೈರ್ಯ ಹೇಳಿಕೊಳ್ಳೂತ್ತಾ ಅವನ ಭೇಟಿಯಾಗುವ ತಯಾರಿ ನಡೆಸಿದೆ.

----------------------------------------------------------------------------------
ಅವನು -
ಚಂದದ ಚೂಡಿದಾರ ಹಾಕಿ ಬಂದಿದ್ದಳು ಅವಳು. ಬಂದ ಹಾಗೇ ಯಾವಾಗಲೂ ಮಾಡುವ ಥರ ಅವಳ ಕೈ ಹಿಡಿದು ಒಮ್ಮೆ ಅಪ್ಪಿಕೊಂಡೆ.
ಅವಳು ಹಿಂಜರಿಯಲಿಲ್ಲ. ಅವಳ ಪರಿಮಳ.. ಹ್ಹ್!! ಇಬ್ಬರೂ ಮತ್ತೆ ನಮ್ಮ ತತ್ವ-ವಿಚಾರ ಹೀಗೇ ಏನೇನೋ ಮಾತಾಡಿಕೊಂಡು ಊಟ ಮುಗಿಸಿದ್ವಿ. ನಾನು ಹೇಳಬೇಕಾದ ವಿಚಾರ ಶುರು ಮಾಡಲಿಕ್ಕೆ ಪೀಠಿಕೆಯಂತೆ,"ಮತ್ತೆ? ಹೇಗಿದೆ ಲೈಫು? ಏನಾದ್ರೂ ಹೊಸತಿದೆಯ?" ಕೇಳಿದೆ.ಅದೇನೋ ಹೇಳಲಿಕ್ಕೆ ಅವಳು ಹಿಂಜರಿಯುವಂತಿತ್ತು. ನನ್ನ ಕಣ್ಣಿನಲ್ಲಿ ಕಣ್ಣನಿಟ್ಟು.. ನನ್ನ ಬೆರಳುಗಳ ಜೊತೆಗೇ ಸರಪಳಿಯ ಬಿಗಿದು "Well..ನನ್ನನ್ನ ಒಬ್ಬ ಹುಡುಗ propose ಮಾಡಿದ್ದ ಈಗೊಂದು ೨ ತಿಂಗಳ ಹಿಂದೆ. ನನ್ನ ಅಪ್ಪಾಜಿ - ಅಮ್ಮಾನಿಗೆ ಹೇಳಿದಾಗ ಅವರು ಅವನ ಬಗ್ಗೆ ವಿಚಾರಿಸಿ ಅವರ ಸಮ್ಮತಿ ತಿಳಿಸಿದರು. ನನಗೆ 'why not' ಅನ್ನಿಸ್ತು. ಹೇಗಿದ್ದರೂ ಮದುವೆಯ ವಯಸ್ಸು. ನನ್ನ criteria ಎಲ್ಲ  suit ಆಗುವಂತಿದಾನೆ. ಹಾಗಾಗಿ ನಾಗು ಒಪ್ಪಿಕೊಂಡೆ."ಕಣ್ಣಿನಲ್ಲಿ ಕಣ್ಣಿಟ್ಟು ಹೇಳಿದ್ದಳು. ಮತ್ತೆ ಕಣ್ಣೆತ್ತಲೇ ಇಲ್ಲ.
ಒಂದು ಕ್ಷಣ ಬೇಕಾಯ್ತು ನನಗೆ ನನ್ನನ್ನ ಸಂಭಾಳಿಸಿಕೊಳ್ಳಲು..ಏನೂ ತಿಳಿಯಲಿಲ್ಲ. ಹೇಗೆ ಪ್ರತಿಕ್ರಿಯಿಸಬೇಕು ಅಂತಾ ಗೊತ್ತಾಗದೇ.. "ಹೇಯ್.. congratulations.." ಅಂದು ಅವಳ ಅಪ್ಪಿಕೊಂಡಿದ್ದೆ. ಅವನ ಬಗ್ಗೆ ಕೇಳುವ ಮನಸ್ಸೂ ಆಗಲಿಲ್ಲ.

---------------------------------------------------------------------------------
ಅವಳು -
ಅವನ ಪ್ರತಿಕ್ರಿಯೆ ನೋಡಿ ಆಶ್ಚರ್ಯ ಆಗಿತ್ತು. ಆದರೆ ಈ ವಿಷಯವನ್ನ ಅವನಿಗೆ ಹೇಳಿದ ಸಮಾಧಾನ ನನ್ನ ನಿರಾಳಗೊಳಿಸಿತ್ತು. ಅವನು ನನ್ನ ತಿಳಿಯಲೇ ಇಲ್ಲ. ನನಗೆ ಅವನ ಬಗ್ಗೆ ಇರುವ ಪ್ರೀತಿ ಅಪೂರ್ಣವಾಗಿ ಉಳಿಯುವ ಪ್ರೀತಿಗಳ  ಥರ. ಆದರೆ ಎಲ್ಲ ಪ್ರೀತಿಗಳೂ ಎಲ್ಲಿ ಪೂರ್ಣಗೊಳ್ಳುತ್ವೆ?ಅಷ್ಟಕ್ಕೂ ಪ್ರೀತಿಯ ಪೂರ್ಣತೆಗೆ  , ಅಪುರ್ಣತೆಗೆ  ಏನು ಆಧಾರ ? Anyways I had to move on.. ಅವನಿಗೆ ಅವತ್ತು  ವಿದಾಯ ಹೇಳುವಾಗ ಅದೇನೋ ಒಂದು ವಿಚಿತ್ರವಾದ  ಭಾವನೆ ಮನಸಲ್ಲಿ. ನನಗವನನ್ನ ಕಳೆದು ಕೊಳ್ಳುವ ಮನಸಿಲ್ಲ. ನನ್ನ- ಅವನ ಗೆಳೆತನ ಬೇಕು ನನಗೆ. ಇದು ಗೆಳೆತನಕ್ಕೂ ಮೀರಿದ ಸಂಬಂಧ. ಅದನ್ನ ಬದಲಾಯಿಸಲು ನನಗೆ ಇಷ್ಟವಿಲ್ಲ. ನನ್ನಲ್ಲಿ ಅವನ ಪ್ರೀತಿ ಬೆಳೆಯುತ್ತಲೇ ಇರುತ್ತದೆ.

---------------------------------------------------------------------------------
ಅವನು -
ನಾನು ತಡ ಮಾಡಿದೆ. ಅವಳು ಸ್ವಲ್ಪ ದಿನ ಕಾಯಬಹುದಾಗಿತ್ತು. ಛೆ !! ತಪ್ಪು ಅವಳದ್ದಲ್ಲ. ನನ್ನದೂ ಅಲ್ಲ. ಎಲ್ಲ ಋಣಾನುಬಂಧ. ಅವಳು ನನಗೇ ಗೆಳತಿಯಷ್ಟೇ ಅಲ್ಲ.ಅದಕ್ಕೂ ಮಿಗಿಲಿನ  ಜೊತೆಗಾರ್ತಿ. ನನಗವಳ ಜೊತೆ ಸದಾ ಬೇಕು. ಇದನ್ನು ಬದಲಾಯಿಸುವ ಮನಸ್ಸು ನನಗಿಲ್ಲ.ಅವಳು ನನ್ನ ಜೊತೆ ಸದಾ ಇರ್ತಾಳೆ. ನನಗೆ ಗೊತ್ತು ನಾನೂ ಅವಳ ಜೊತೆಗೆ ಇರ್ತೀನಿ. ಅವಳಿಗೆ ನನ್ನ ಮೇಲಿನ ಪ್ರೀತಿ ಕಡಿಮಾಗೋದಿಲ್ಲ. ಆದರೆ ನನ್ನಲ್ಲಿ ಮಾತ್ರ ಅವಳ ಬಗೆಗಿನ ಪ್ರೀತಿ ಬೆಳೆಯುತ್ತಲೇ ಇರುತ್ತದೆ.

----------------------------------------------------------------------------------