ನೀನಿಲ್ಲದ ಊರಲ್ಲಿ-2..



Hey Dreamboy ,


ಈ ಸಲ ಮನೆಗೆ ಹೋಗಿದ್ನಲಾ.. ಅಲ್ಲಿ ಎಷ್ಟು ಚನ್ನಾಗಿ ಮಳೆ ಬರ್ತಾ ಇತ್ತು ಗೊತ್ತಾ?? ಎಷ್ಟು ಚಂದದ ಹಸಿರು.. ಒಂದ್ ಥರಾ ಚಳಿ.. ಹನಿ ಹನಿಸೊ ಎಲೆ, ದಾಸವಾಳ, ಬ್ರಹ್ಮ ಕಮಲ.. ಮಳೆಗಾಲದಲ್ಲಿ ಮಾತ್ರ ಆಗೋ ಕಾಡು ಹೂಗಳು.. ಒದ್ದೆ ಒದ್ದೆ ನೆಲ.. ಕಪ್ಪು ಆಕಾಶ.. well.. ಮಳೆ ಅಂದ್ರೆ ನಂಗೆ ತುಂಬಾ ಇಷ್ಟ ಕಣೋ.. ತುಂಬಾ!!! ನಮ್ಮ ಮನೆ ಬಾವಿಯಲ್ಲಿ ಇಷ್ಟು ನೀರು ತುಂಬಿದೆ ಗೊತ್ತಾ?? ನಾನು ಬಾವಿಯಿಂದಾ ನೀರು ತರೋದಕ್ಕೆ ಹೋಗಿ, ಜಾರಿ ಬಿದ್ದು.. ಬೇಡ ಅವಾಂತರ.. ಆದ್ರೂ ನಂಗೆ ಮಳೆ ಅಂದ್ರೆ ಇಷ್ಟ.


ಹ್ಮ್ಮ್!!! ನಿನಗೆಲ್ಲಿ ಗೊತ್ತಿರುತ್ತೆ ಮಳೆಗಾಲದ ಚಂದ?? ಬಯಲು ಸೀಮೆ ಮಂಡು ನೀನು!! ೪ ಹನಿ ಬಿದ್ರೂ ನಿನಗೆ ಜೋರು ಮಳೆ ಬಿದ್ದಂಗಿರುತ್ತೆ ನಿಂಗೆ.. ಒಮ್ಮೆ ನಿನ್ನನ್ನ ನನ್ನ ಊರಿಗೆ ಕರಕೊಂಡು ಹೋಗಬೇಕು.. ಅಲ್ಲಿ ಬ್ಯಾಣದ ಕಾಲುದಾರಿಯಲ್ಲಿ ನಡೆಸಬೇಕು, ಪಾಚಿ ಕಟ್ಟಿರೋ ಬ್ಯಾಣದ ರಸ್ತೆಯಲ್ಲಿ ನೀನು ಬೀಳಬೇಕು (ಹಿ ಹಿ ಹಿ), ಗದ್ದೆ ನೆಟ್ಟಿ ಆಗ್ತಾ ಇರುತ್ತಲ್ಲಾ ಆವಾಗ ನಿನ್ನ ತಲೆ ಮೇಲೆ ಒಂದು ಕಂಬಳಿ ಹೊದಿಸಿ, ಒಂದು ಹಾಳೆ ಟೊಪ್ಪಿ ಹಾಕಿ, ಗದ್ದೆಯಲ್ಲಿ ಬಿಡತೀನಿ.. ಪಿಚ ಪಿಚ ಅನ್ನೋ ಆ ಮಣ್ಣಲ್ಲಿ ಇಷ್ಟು ಮಜ ಬರುತ್ತೆ ಗೊತ್ತಾ?? ಮತ್ತೆ ಉಂಬಳ ಇರುತ್ತಲ್ಲಾ ಅಲ್ಲಿಗೆ ಕರಕೊಂಡು ಹೋಗ್ತೀನಿ.. (ಹಿ ಹಿ ಹಿ) ಹೆದರ್ತಾ ಇದೀಯೇನೋ?? ಹೆದರಬೇಡಪ್ಪಾ.. ಹಾಗೆ ಸುಮ್ನೆ ತಮಾಷೆ ಮಾಡ್ತಾ ಇದ್ದೆ..


ಆದ್ರೂ ಮಳೆಗಾಲ ಎಷ್ಟು ಚಂದಾ ಅಲ್ವೇನೋ?? ಬೆಳ ಬೆಳಗ್ಗೆ ಎದ್ದ ಕೂಡಲೆ ಬಚ್ಚಲು ಮನೆಯ ಒಲೆಯ ಬೆಂಕಿ ಕಾಯಿಸೋದು,.. btw..you know wat?? ನಮ್ಮ ಕಡೆ ಮಳೆಗಾಲಲ್ಲಿ ಇಡೀ ದಿನ ಒಲೆಯಲ್ಲಿ ಬೆಂಕಿ ಇರುತ್ತೆ.. ಹಂಡ್ಯಾದಲ್ಲಿ ಬಿಸಿ ಬಿಸಿ ನೀರು.. wow!!its so nice..!!! ಮತ್ತೆ ಗೇರು-ಪೀಕ, ಹಲಸಿನ ಹಣ್ಣಿನ ಬ್ಯಾಳೆ ಎಲ್ಲ ಸುಟ್ಟು ತಿನ್ನೋದು.. ಕರಕ್ಲಿ, ಕಟ್ಣೆ, ಚಕ್ಕೆ ಪೊಳದ್ಯಾ..ಊಮ್ಮ್... ನನ್ನ ಬಾಯಲ್ಲಿ ನೀರು ಬರ್ತಾ ಇದೆ.. ಒಹ್!! ನಿನಗೆ ಕರಕ್ಲಿ- ಕಟ್ಣೆ ಅಂದ್ರೆ ಏನು ಅಂತಾ ಗೊತ್ತಿಲ್ಲಾ ಅಲ್ವಾ.. ಇರಲಿ ಬಿಡು ನಾನೇ ಯಾವಾಗ್ಲಾದ್ರೂ ಮಾಡಿ ತಿನ್ನಿಸ್ತೀನಿ.. ಆಯ್ತಾ??


Btw ನಿಂಗೆ ಚೊರಟೆ ಅಂದ್ರೆ ಗೊತ್ತಾ?? ಅದಕ್ಕೆ englishನಲ್ಲಿ ಏನಂತಾರೆ ಅಂದ್ರೆ.. ಊಮ್ಮ್.. ನಂಗೆ ಈಗ ನೆನಪಾಗ್ತಾ ಇಲ್ಲಾ.. ಅದಕ್ಕೆ ಸಹಸ್ರಪದಿ ಅಂತಾ ಕೂಡಾ ಹೇಳತಾರೆ ನೋಡು.. ಅದನ್ನ ಮುಟ್ಟಿದ್ರೆ ಅದು ಚಕ್ಲಿ ಥರಾ ಮುದುರಿ ಕೊಳ್ಳುತ್ತಲ್ಲಾ..ಅದು.. ಎಷ್ಟು ಇದೆ ಗೊತ್ತಾ ನಮ್ಮ ಮನೆ ಹತ್ರಾ??ನಾನಂತು ಅದರ ಜೊತೆ ಆಡಿ-ಆಡಿ ಇಟ್ಟೆ ಈ ಸಲ ಮನೆಗೆ ಹೋದಾಗ..


ಮಳೆಗಾಲ ಅಂದ್ರೆ ಮಲೆನಾಡಲ್ಲಿ ಇರಬೇಕು ಕಣೋ.. ಬೆಚ್ಚಗೆ ಕಂಬಳಿ ಹೊದಕೋಂಡು ಮಲಗಿದ್ರೆ..ಆಹ್!! ಎನು ಸುಖ!! btw ನಿನಗೆ ಗೊತ್ತಲ್ಲಾ ನನಗೆ ಸ್ವಲ್ಪ ಛಳಿ ಭ್ರಮೆ ಜಾಸ್ತಿ ಅಂತಾ.. ನಾನು ಮನೆಗೆ ಹೋದಾಗ ಎಷ್ಟು ಛಳಿ ಇತ್ತು ಅಂದ್ರೆ.. ನಾನು ರಾತ್ರಿ ಮಲಗೋವಾಗ.. 2 ಕಂಬಳಿ,1 ದುಪಡಿ, 1 ಹೊದಿಕೆ, ಮೇಲ್ಗಡೆಯಿಂದಾ ಅಮ್ಮನ ಒಂದು ಹಳೇ ಸೀರೆ ಹೊದಕೋಂಡು ಮಲಗತಿದ್ದೆ.. ಬೆಚ್ಚಗಾಗ್ತಿತ್ತು.." ಅಷ್ಟೇನಾ ??"ಅಂತಾ ಟೀಕೆ ಮಾಡ್ಬೇಡಾ ನೀನು.. ಹೇಳ್ದೆ ಅಲ್ಲಾ ನಾನು ನಿಂಗೆ.. ನನಗೆ ಚಳಿ ಭ್ರಮೆ ಜಾಸ್ತಿ ಅಂತಾ..


ಇರಲಿ ಬಿಡು.. ಮತ್ತೇನು?? ನಿಮ್ಮ ಬಯಲು ಸೀಮೆಯಲ್ಲಿ ಮಳೆಗಾಲ ಅಂದ್ರೆ ಏನು ಮಾಡ್ತೀರಾ?? ಎನೇನು special ಅಡಿಗೆ ಇರುತ್ತೆ?? ಹೇಳೋ.. plz.. ಅದೇನು ಮುಖ ಊದಿಸಿ ಕೊಂಡು ಕೂತಿದೀಯಾ?? ಒಹ್!! ಬಯಲು ಸೀಮೆ ಮಂಡು ಅಂತಾ ನಿನ್ನ ಕರೆದೆ ಅಂತಾನಾ?? ಹ್ಮ್ಮ್ಮ್!!!! ಬಯಲುಸೀಮೆಯವರನ್ನಾ ಬಯಲುಸೀಮೆಯವರು ಅಂತಾ ಕರಿಯದೆ ಮತ್ತೇನು ಕರೀಲಿ?? ಸರಿಯಪ್ಪಾ.. ನಿನ್ನ ’ಮಂಡು’ ಅನ್ನಲ್ಲಾ.. Happy??


ಸರಿ.. ಈಗ್ಲಾದ್ರೂ ಹೇಳು.. ನಿಮ್ಮ ಕಡೆ ಮಳೆಗಾಲದ ಬಗ್ಗೆ.. ಕಾಯ್ತಾ ಇದೀನಿ..




ನಿನ್ನ ನೆನಪೇ ಅಲ್ಲವೇ??


ನಿನ್ನ ನೆನಪೇ ಅಲ್ಲವೆ
ಕತ್ತಲಲಿ ಕಂಡಿದ್ದು?
ನೂರು ಮಾತಲ್ಲೂ.. ಮೌನವನ್ನೇ ನುಡಿಸಿದ್ದು?
ಎದೆಯಾಳದಲ್ಲಿ ಎಲ್ಲೋ ಅಡಗಿದ್ದು,
ನೆನಪ ನೆಪ ಮಾಡಿ ಬಂದೆ.. ಅಲ್ಲವೆ?
ಗಂಟಲ ನರ ಬಿಗಿಯಿತು,
ಕಣ್ಣಂಚಲಿ ಕಂಬನಿ ಹನಿಯಿತು,
ಕ್ಷಣ ಕ್ಷಣವೂ ದಿನ ದಿನವೂ
ದೂರ ಮಾಡಿದಷ್ಟೂ..
ಹತ್ತಿರ ಬರುವೆಯಲ್ಲವೆ??

ಮತ್ತೆ ಬರಡಾದೆ ನಾನು,
ಬರಬೇಡ..
ಯಾವ ನೆಪವನೂ ಮಾಡಬೇಡ..
ವಸಂತನಪ್ಪುವ ಮನಸಿಲ್ಲ..
ನಿನ್ನೋಡನೀಜಿ ದಡ ಸೇರಲಾರೆ..

ಎಲ್ಲಿಂದಲೋ ಬಂದು, ಸವರಿ ನೆಡೆವ ಗಾಳಿಯಂತೆ,
ಎಲ್ಲೆಲ್ಲೋ ಹರಿದು,ಕೊರೆದು ದಡವ, ಭೋರ್ಗರೆವ ಕಡಲಂತೆ,
ಎಲ್ಲಿ ಆದಿ ನಿನಗೆ, ಎಲ್ಲಿ ಅಂತ್ಯ??
ಇರುವಷ್ಟೂ ಹೊತ್ತು..
ಮೈಯೆಲ್ಲ ನವೆಗೊಳಿಸಿ, ಹದ ಹದವಾಗಿ ಸುಟ್ಟು ನುಂಗುವುದು
ನಿನ್ನ ನೆನಪೇ ಅಲ್ಲವೆ??

ಪೂರ್ವದಿಂದ ಪಡುವಣಕೆ ಸಾಗುವ ರವಿ
ಕತ್ತಲ ನೀಗಿ ಬೆಳಕ ಬೀರುವನೋ,
ಬೆಳಕ ನೆಪದಲ್ಲಿ ಕತ್ತಲ ತರುವನೋ...
ತಿಳಿದವರಾರು??
ನಿನ್ನ ನೆನಪೂ ಅಷ್ಟೆ!!!
ಚಿತ್ತದಿಂದ ಹೋರಬಂದು ನೋಯಿಸುವುದೋ..
ನೋಯಿಸಲೆಂದೇ ಹೊರಬರುವುದೋ..
ಗೊತ್ತಿಲ್ಲ!!!



ದಟ್ಟ ಕಾಡಿಗೆಲ್ಲಿಯದು ಹಗಲು??
ಕಡಲ ಗರ್ಭಕ್ಕೆಲ್ಲಿಯದು ಬೆಳಕು?
ರವಿಯೂ ಕಾಣದಾದ..
ನಲಿವು,ಗೆಲುವು ಬರಿಯ ಮರೀಚಿಕೆ..
ನಾನು-ನೀನು ವಿಧಿಯ ಚಿತ್ರದಲಿ ಮುಗಿದು ಹೋದ ಸಂಚಿಕೆ..
ತಿಳಿದೂ ಕಾಲವ ಹಿಂದಕೆಳೆವ ಬಯಕೆ
ನಿನ್ನ ನೆನಪಿನದೇ ಅಲ್ಲವೇ?
ಬಣಗುಡುವ ಎದೆಯಲ್ಲೂ ದನಿಮೂಡಿಸುವಾಸೆ
ನಿನ್ನ ನೆನಪಿನದೇ ಅಲ್ಲವೆ??