ಅಪೂರ್ಣ..


ಬಹಳಷ್ಟು ದಿನಗಳಿಂದ ಅದೇನು ಬರಿಯಬೇಕೋ ಗೊತ್ತಾಗ್ತಾ ಇಲ್ಲ.. ಅದೇನೇ ಬರೆದರೂ ಅಪೂರ್ಣ ಅನ್ನಿಸ್ತಾ ಇದೆ. ಹಾಗೇ ಅಪೂರ್ಣಗೊಂಡ ಒಂದಷ್ಟು ಕವಿತೆಗಳನ್ನ ಇಲ್ಲಿ ಬರೀತಾ ಇದ್ದೀನಿ.. ದಯವಿಟ್ಟು ಕ್ಷಮಿಸಬೇಕು!!!

೧)
ಕೆರೆಯ ಕೆಂದಾವರೆ ಬೇಕು,
ಬೆಳ್ಳಗಿನ ರೆಕ್ಕೆ ಬೇಕು ಬಾನಾಚೆಗೆ ಹಾರಲು,
ಹಾಲ್ದಾರಿಯಲ್ಲಿ ಹರಡಿರುವ ಚುಕ್ಕಿಗಳೆಲ್ಲ ಬೇಕು
ನವಿಲಾಗಬೇಕು ಮಳೆಗೆ ನಲಿದಾಡಲು
ಬಿದಿಗೆಯ ಚಂದ್ರ ಬೇಕು
ಮುತ್ತಂಥ ಮಂಜಾಗಬೇಕು ಎಳೆ ಬಿಸಿಲಿಗೆ ಕರಗಲು...

೨)
ಕವಿತೆಯ ಮೊದಲು, ಮನಸ್ಸಿಗೆ ಬರುವ ಮುಗ್ಧ ಮುಗುಳುನಗೆ ನೀನು.
ಮರುಳು ಮುಸ್ಸಂಜೆಗೆ ನಿನ್ನ ಸ್ವಾಗತ.

೩)

ಪ್ರೀತಿಗೆ ನೀನೇನು ಕೊಡುವೆ?
ಒಂದು ಮುತ್ತು?
ಗುನುಗುನಿಸಲೊಂದು ಹಾಡು?
ಎರಡು ಸಾಲಿನ ಕವಿತೆ?
ಬೊಗಸೆಯಷ್ಟು ನೆನಪು?
ಅರೆಘಳಿಗೆ ನೆಮ್ಮದಿ?
ಗಾಳಿ ಸುಯ್ ಗುಟ್ಟರೆ, ನಿನ್ನ ಹೆಜ್ಜೆ ಸಪ್ಪಳ
ಎಲ್ಲಿಂದ ಎಲ್ಲಿಗೆ ನಿನ್ನ ಪಯಣ?
ನಿಂತಲ್ಲಿ ನೆರಳು,
ತಳಮಳ,
ಬಣಗುಡುವ ಮೌನ,
ಕಣ್ಣೀರು,
ಒದ್ದೆ ಗುರುತಿನ ಕೆನ್ನ,
ಬರಿದಾದ ಹಾಳೆ..
ಪ್ರೀತಿಗೇನು ಬಿಟ್ಟು ಹೊರಟೆ???