ಸತ್ಯಾನ್ವೇಷಣೆ



ಕಂದ ನಿದ್ದೆಹೋಗಿದ್ದ,
ಮನೆಕಟ್ಟಿದ್ದ ಕನಸ ಹೊದ್ದುಮಲಗಿದ್ದ,
ಮನಸು ಮೈಮರೆತಿತ್ತು.
ಅವನೆದ್ದು ಹೋಗಿದ್ದ ಎಲ್ಲವನ್ನೂ ಮಲಗಿದಲ್ಲಿಯೇ ಬಿಟ್ಟು.
ತೆರೆದಿತ್ತು ಮುಚ್ಚಿದ ಬಾಗಿಲೊಂದೇ ......?

ನಿದ್ದೆ ತಿಳಿದೆದ್ದ ಕಣ್ಣು ರಚ್ಚೆ ಹಿಡಿದು ಕುಳಿತಿತ್ತು.
ನೆರೆಯ ಕಣ್ಣೋಟ ಹೊರೆಯಾದ ಬದುಕು.
ಕುದ್ದು ಹೊದ ಬಾಳಿಗೆ ಕದ್ದು ಹೋದವನ ಹುಡುಕಾಟ.
ಧರೆಯ ನೆಚ್ಚಿದ ಯಶೋಧರೆಗೆ ವಸುಂಧರೆಯ ಮುಚ್ಚಿದ ಬಾಗಿಲು.
ನದಿ ತೊರೆದ ನೀರಿನದು ದಿಕ್ಕು ತೊರೆವ ನಡಿಗೆ

ಆಲಾಪವಿಲ್ಲ,ವಿಲಾಪ ನಿಲ್ಲದ ಹುಡುಕಾಟ.
ಅವರು,ಇವರು,ಹೋದವರೆಲ್ಲ ಬಂದರು.
ಆತನೊಬ್ಬ ದಿವ್ಯಜ್ಞಾನಿಯೆಂದರು.
ಬೋಧಿವೃಕ್ಷದ ಕೆಳಗೆ ಸತ್ವ ತುಂಬಿದ ಬೆಳಕು.
ಕರುಣೆಯ ನೋಟ ಶಾಂತಿ ಚೆಲ್ಲುವ ಕಾಂತಿ.

ಜೋಡಿ ಜೀವವಾಗಿ ಮಿಡಿದ ಮನ ಕಾಡಿದ್ದು ಕೆಲಕ್ಷಣ.
ದುಗುಡ ಹೊತ್ತಮನಕ್ಕೆ ಶಾಂತಿಯ ಗೂಡಿನ ತವಕ.
ಸರದಿಯ ಸಾಲು ಕಣ್ಣು ತುಂಬುವಷ್ಟು ದೂರ.
ಸರತಿಯ ದಾರಿಯ ನಡುವೆ ಗುರುತು ಸಿಗಲೆಂಬ ಪುಳಕ
ಹೆಜ್ಜೆಗೊಂದು ಯುಗಸಂದ ದಾರಿ,
ದೂರಸರಿದ ನೀರಿಗೂ ಸಾಗರದ ಬಯಕೆ.

ಕರುಣೆಯ ನೀಲಿಗೆ ಶಾಂತಿಯ ಸೊಗಸು.
ತೀರದ ಆತಂಕ,ಆತ್ಮಾನುಕಂಪಕ್ಕೂ ಅರ್ಪಣೆಯ ಭಾವ.
ಗಮ್ಯ ಸೇರಿದ ಹನಿಗೆ ಅದರದ್ದೇ ಸಾರ್ಥಕತೆ.
ತೆರೆದ ಆಕಾಶಕ್ಕೆ ಯಾವ ಬಾಗಿಲ ಹಂಗು.?

-ಅಮ್ಮ (ಶೈಲಜಾ ಗೋರನ್ಮನೆ)

4 comments:

Jagali bhaagavata said...

ಅಮ್ಮ ಬರೆದಿದ್ದಾ? ಚೆನ್ನಾಗಿದೆ.

Rajesha said...

kavana thumba chennagide..... Adre yaaru bardhirodu antha gothagilla...

Ittigecement said...

ಸಿದ್ಧಾರ್ಥ ಬುದ್ದನಾದ..

ಯಶೋಧರೆಯ ಮನದಳಲು..
ಸಣ್ಣವಯಸ್ಸಿನ...
ನಡು ಬಾಳಿನಲ್ಲಿ ಪಟ್ಟಿರಬಹುದಾದ..ನೋವು , ಸಂಕಟ..
ಯಾರೂ ಯೋಚಿಸುವದಿಲ್ಲ..

ಚಂದದ ಕವನ..

ಶೈಲಜಾರವರಿಗೆ ..
ಅಭಿನಂದನೆಗಳು..

Niveditha said...

@jagali Bhaagavata
hmm.. ammane barediddu.. nimma thanksna avarige convey maadteeni.

@Rajesha
Thanks.. adu nanna amma barediddu.

@simentu maralina madhye..
nija..nimma abhinandanegalanna nanna ammaning convey maadteeni.